ಇಡಗುಂಜಿ 
ಉತ್ತರ ಕರ್ಣಾಟಕದ ಯಾತ್ರಾಕ್ಷೇತ್ರಗಳಲ್ಲೆಲ್ಲ ವಿಶಿಷ್ಟವಾದುದು. ಭರತಖಂಡದ ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದು. ದ್ವಿಭುಜ ಗಣಪತಿಯ ಸುಂದರ ಶಿಲಾವಿಗ್ರಹವಿಲ್ಲಿದೆ. ಇಂಥ ವಿಗ್ರಹ ಕೇವಲ ಎರಡೇ ಸ್ಥಳಗಳಲ್ಲಿವೆ : ಒಂದು ಇಡಗುಂಜಿಯಲ್ಲಿ, ಇನ್ನೊಂದು ಗೋಕರ್ಣದಲ್ಲಿ.

	ಶರಾವತಿಯ ಮುಖ್ಯಪ್ರದೇಶದ ಎಡಭಾಗದಲ್ಲಿ ಇಡಗುಂಜಿಯಿದೆ. ಹೊನ್ನಾವರದಿಂದ ಇಲ್ಲಿಗೆ ಎಂಟು ಮೈಲಿ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಇಡಗುಂಜಿ ಎಂಬ ಹೆಸರು ಇಡಾಕುಂಜೆ ಎಂಬುದರಿಂದ ಬಂದುದು. ಮೊದಲು ಈ ಪ್ರದೇಶಕ್ಕೆ ಗುಂಜಾರಣ್ಯ ಎಂಬ ಹೆಸರು ಇತ್ತು. ಈಗ ಸುಮಾರು ಎರಡೂವರೆ ಸಾವಿರ ಜನಸಂಖ್ಯೆ ಇರುವ ಫಲಭರಿತ ಪ್ರದೇಶವಿದು.

	ಇಡಗುಂಜಿ ವಿಶೇಷತಃ ಹವ್ಯಕ ಜನಾಂಗದ ಯಾತ್ರಾಕ್ಷೇತ್ರ. ವಿಘ್ನೇಶ್ವರ ಅವರ ಕುಲದೈವ. ಇಲ್ಲಿ ಅವನಿಗೆ ಕೊಳಯಡಿಕೆ ಗಣಪತಿ ಎಂಬ ಹೆಸರೂ ಇದೆ. ಅಡಕೆ ತೋಟಗಳಿಗೆ ಕೊಳೆರೋಗ ಬಂದಾಗ ಹರಕೆ ಹೊರುವುದು ಸಾಮಾನ್ಯ. ಉತ್ತರ ಕನ್ನಡದ ಯಕ್ಷಗಾನ ಪರಂಪರೆಗೆ ಇಡಗುಂಜಿಯ ಗಣಪತಿ ಮತ್ತು ಅಲ್ಲಿಂದ ಸುಮಾರು ಹತ್ತು ಮೈಲಿ ದೂರದಲ್ಲಿರುವ ಗುಂಡಬಾಳದ ಹನುಮಂತದೇವರು ಸ್ಫೂರ್ತಿ ಸ್ವರೂಪರು. ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ದೇಶಕ್ಕೆ ಪ್ರಸಿದ್ಧ ನಟರನ್ನು ನೀಡಿದೆ. ಇವರು ಇಲ್ಲಿಂದ ಕಾಶ್ಮೀರದವರೆಗೂ ಪರ್ಯಟನೆ ಮಾಡಿ ಜನಮನ ಸೂರೆಗೊಂಡಿದ್ದಾರೆ. ಇಡಗುಂಜಿ ಉತ್ತಮ ಶಿಕ್ಷಣ ಕೇಂದ್ರವೂ ಹೌದು. ಇಲ್ಲಿ ಗುರುಕುಲ ಪದ್ಧತಿಯ ಸಂಸ್ಕøತ ಪಾಠಶಾಲೆಯಿದ್ದು ಐದು ವರ್ಷಕಾಲ ವಿದ್ಯಾರ್ಥಿಗಳಿಗೆ ಉಚಿತ ಊಟವಸತಿಗಳ ಸೌಲಭ್ಯವಿದೆ. ಇಲ್ಲಿಯ ಸಂಸ್ಕøತಭ್ಯಾಸಕ್ಕೆ ಸರ್ಕಾರದ ಮನ್ನಣೆಯಿದೆ. ದೇವಸ್ಥಾನದ ಪರಿಸರ 17 ಗುಂಟೆ ಕ್ಷೇತ್ರವನ್ನಾವರಿಸಿದ್ದು, ದೇವಾಲಯ ಮೂರು ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟಿನಿಂದ ನಿರ್ಮಿತವಾಗಿದೆ. ಇದರ ಮೇಲೆ 22 ತೊಲ ಚಿನ್ನದ ಲೇಪವುಳ್ಳ 78 ಕಿ.ಗ್ರಾಂ. ತೂಕದ ಪಂಚಲೋಹದ ಕಳಶವಿದೆ. ಇಲ್ಲಿ ಪ್ರತಿವರ್ಷವೂ ರಥಸಪ್ತಮಿಯ ದಿನ ರಥೋತ್ಸವವೂ ಗಣೇಶ ಚತುರ್ಥಿಯ ದಿವಸ ವೈಭವೋಪೇತ ಉತ್ಸವವೂ ನಡೆಯುತ್ತದೆ. ಈ ದೇವಸ್ಥಾನದ ಆಡಳಿತವನ್ನು ವಿಶ್ವಸ್ಥ ಮಂಡಳಿಯೊಂದು ನೋಡಿಕೊಳ್ಳುತ್ತಿದೆ.

	ಲೋಕ ಕಲ್ಯಾಣಾರ್ಥ ವಾಲಖಿಲ್ಯಾದಿ ಋಷಿಗಳೂ ಕುಟಜಾದ್ರಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದಾಗ ಅನೇಕ ವಿಘ್ನಗಳು ಉಂಟಾದುವು. ತ್ರಿಲೋಕ ಸಂಚಾರಿ ನಾರದ ಇದನ್ನರಿತು ಪರಿಹಾರಕ್ಕೆ ಮಹಾಗಣಪತಿಯ ಪೂಜೆಗೈಯಬೇಕೆಂದು ಆದೇಶವಿತ್ತ. ಗಣನಾಥನನ್ನು ಭೂಲೋಕಕ್ಕೆ ಕರೆತರುವ ಹೊರೆ ಹೊತ್ತ ನಾರದ ಆ ಮುನಿಗಡಣದೊಂದಿಗೆ ಪಡುವಣಕ್ಕೆ ಅಭಿಮುಖವಾಗಿ ಬಂದು ವಟಿಕಾ ಘಟ್ಟದಿಂದಿಳಿದು ಗೋವರ್ಧನ ಗಿರಿಯಲ್ಲಿ (ಗೇರುಸೊಪ್ಪೆ) ನಿಂತು ಸುತ್ತಲ ಪ್ರದೇಶವನ್ನು ನೋಡಿದ. ಶರಾವತಿಯ ಮುಖಜಪ್ರದೇಶ ಅವರೆಲ್ಲರ ಮನಸೆಳೆಯಿತು. ಅಲ್ಲಿ ಪೂರ್ವ-ಪಶ್ಚಿಮಗಳಲ್ಲಿ ಔಷಧಿ, ವನೌಷಧಿ ಪರ್ವತಗಳಿರುವ ಪ್ರದೇಶವನ್ನು ಆರಿಸಿ, ಶರಾವತಿಯ ಎಡಪ್ರದೇಶದಲ್ಲಿರುವ ಅರಣ್ಯ ಪ್ರದೇಶಕ್ಕೆ ನಾರದ ಇಡಾಕುಂಜ ಎಂದು ಹೆಸರಿಟ್ಟು ಅದೇ ನಾಮದಿಂದ ಪ್ರಸಿದ್ಧಿ ಹೊಂದಲೆಂದು ವೀಣೆ ನುಡಿಸಿ ಹರಸಿದ.

	ಪ್ರತಿದಿನ ಪಂಚಕಜ್ಜಾಯ ತಿನ್ನಲು ಕೊಡುವುದಾಗಿ ಹೇಳಿ ಕೈಲಾಸದಿಂದ ಗಜಾನನನನ್ನು ನಾರದ ಅಲ್ಲಿಗೆ ಕರೆತಂದ. ಭಕ್ತರ ಪಾಲನೆಯಲ್ಲಿ ತನಗೆ ನೆರವಾಗಬೇಕೆಂದು ಗಣನಾಥ ಇಚ್ಛಿಸಲು ಹರಿಹರ ಬ್ರಹ್ಮಾದಿಗಳೂ ದೇವತೆಗಳೂ ಋಷಿಗಳೂ ಅವನೊಂದಿಗೆ ಬಂದರು. ಗಣಪತಿಯ ವಾಸಕ್ಕೆಂದು ವಿಶ್ವಕರ್ಮ ಸುಂದರವಾದ ವಿಗ್ರಹವನ್ನು ಏಕಶಿಲೆಯಲ್ಲಿ ನಿರ್ಮಿಸಿದ. ಈ ಲಂಬೋದರಮೂರ್ತಿ ತನ್ನ ದ್ವಿಭುಜಗಳಲ್ಲಿ ಪದ್ಮ, ಮೋದಕಧಾರಿಯಾಗಿದೆ. ಲಕ್ಷ್ಮಿ ಸರಸ್ವತಿ ಪಾರ್ವತಿಯರನ್ನೂ ದೇವ ದೇವತೆಗಳನ್ನೂ ಒಳಗೊಂಡು ಬಂದ ಮಹಾಗಣಪತಿಯನ್ನು ಪೂರ್ವತ್ರೇತಾಯುಗದ ನೃಪವರ ಚಂಡವಿದ್ಯಾಶಕಾಬ್ದ 813ನೆಯ ವಿಭವ ಸಂವತ್ಸರದ ಉತ್ತರಾಯಣ, ಶಿಶಿರಋತು, ಮಾಘಮಾಸ, ಶುಕ್ಲಪಕ್ಷ, ದ್ವಿತೀಯ ಸೌಮ್ಯವಾಸರದ, ಉತ್ತರಾಭಾದ್ರನಕ್ಷತ್ರದ ಶುಭ ಮುಹೂರ್ತದಲ್ಲಿ ನಾರದಮಹರ್ಷಿ ಪ್ರತಿಷ್ಠಾಪಿಸಿದ. ಗಣಪತಿ ತನ್ನ ಸಮ್ಮುಖದಲ್ಲಿ ಗಣೇಶ ತೀರ್ಥವನ್ನು ಸ್ಥಾಪಿಸಿದ. ಹಾಗೆ ಪೂರ್ವ ದಿಕ್ಕಿನಲ್ಲಿ ವಿಷ್ಣು ತನ್ನ ಚಕ್ರದಿಂದ ಚಕ್ರತೀರ್ಥವನ್ನೂ ಶಿವ ತನ್ನ ಶೂಲದಿಂದ ಪಶ್ಚಿಮದಲ್ಲಿ ಶೂಲ ತೀರ್ಥವನ್ನೂ ತನ್ನ ಕಮಂಡಲೋದಕದಿಂದ ಬ್ರಹ್ಮ ದಕ್ಷಿಣದಲ್ಲಿ ಕಮಂಡಲ ತೀರ್ಥವನ್ನೂ ಸ್ಥಾಪಿಸಿದರು. ನಾರದನೂ ತನ್ನ ದೇವತೀರ್ಥವನ್ನು ವಾಯುವ್ಯದಲ್ಲಿ ನಿರ್ಮಿಸಿದ. ಈ ತೀರ್ಥಗಳಲ್ಲಿ ತ್ರಿಮೂರ್ತಿಗಳೂ ತಮ್ಮ ರಾಕ್ಷಸ ಸಂಹಾರದ ದೋಷವನ್ನು ತೊಳೆದುಕೊಂಡರು. ಮಹಾಗಣಪತಿ ಭಕ್ತಾಭೀಷ್ಟಪ್ರದನೂ ನಿರ್ವಘ್ನಕಾರಕನೂ ಆದ.

	ಈ ವಿಷಯ ಸ್ಕಂದಪುರಾಣೋಕ್ತವಾದುದು.							
(ಜಿ.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ